Tuesday, January 13, 2009

ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.



" BUTTERFLIES DON'T KNOW THE COLOUR OF THEIR WINGS.BUT HUMAN EYES KNOW HOW NICE IT IS.LIKE WISE DR.RAMANNA DOESN'T KNOW HOW GOOD HE IS;BUT WE- KNOW HOW SPECIAL HE IS..!"
ನಮ್ಮ ಮಾಸ್ತರ್ ರಾಮಣ್ಣ ಈಗ ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೮.’
ನನ್ನ ಜೀವಮಾನದಲ್ಲಿ ಯೋಗ್ಯರಿಗೆ ಪುರಸ್ಕಾರ ಸಲ್ಲುವುದನ್ನು ಇನ್ನೆಂದಿಗೂ ನೋಡಲಾರೆ ಎಂದು ಕೊಂಡಿದ್ದೆ. ಆದರೆ ಆ ಅನಿಸಿಕೆ ಇಂದು ಸುಳ್ಳಾಯಿತು. ನಂಬಿಕೆ ಸುಳ್ಳಾದಾಗಲೂ ಖುಷಿ ಪಡಬಹುದಾದ ಸುವರ್ಣ ಘಳಿಗೆಗಳು ನನ್ನಂತಹ ಅದೆಷ್ಟು ಜನರ ಜೀವನದಲ್ಲಿ ಬರಬಹುದು? ಪ್ರಶಸ್ತಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲವಿದು. ಪ್ರಶಸ್ತಿ ಘೋಷಿಸುವವರು ಯೋಗ್ಯರನ್ನು ಗುರುತಿಸಿ, ನೀಡುವುದು ಭಗೀರಥ ಪ್ರಯತ್ನಕ್ಕಿಂತ ಒಂದು ಗುಂಜಿ ಹೆಚ್ಚೇ ಶ್ರಮದಾಯಕ.
ಕನ್ನಡಪ್ರಭ ಹಾಗು ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಅಪ್ಪಟ ಚಿನ್ನವನ್ನು ಶೋಧಿಸಿದೆ. ಒಂದರ್ಥದಲ್ಲಿ ಈ ಪ್ರಶಸ್ತಿಗೆ ರಾಮಣ್ಣ ಮೌಲ್ಯ ತಂದಿದ್ದಾರೆ.ಕೆಲವರಿಗೆ ಪ್ರಶಸ್ತಿ ಬಂದ ಮೇಲೆ ಮೌಲ್ಯ ಬರುತ್ತದೆ..! ಉದಾಹರಣೆಗೆ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆಯಾದಾಗ ಆ ವಿಶ್ವವಿದ್ಯಾಲಯದ ಗೌರವ ಹೆಚ್ಚುತ್ತದೆ. ಆದರೆ ಅದೇ ಬಿ.ಎಸ್.ಯಡ್ಯೂರಪ್ಪ ಅಮೇರಿಕೆಯಿಂದ ಇದೇ ಗೌರವ ಡಾಕ್ಟರೇಟ್ ಪಡೆದು ಬಂದಾಗ..ಮಾಧ್ಯಮಗಳ ಪ್ರತಿಕ್ರಿಯೆಗಳಿಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಹಾಗೆ..
ರಾಮಣ್ಣ ಪರಿಶ್ರಮದಿಂದ ಸತತ ಅಧ್ಯಯನಶೀಲನಾಗಿ ಗಳಿಸಿದ್ದು ಡಾಕ್ಟರೇಟ್. ಅದೂ ‘ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು’ ಎಂಬ ವಿಷಯವಾಗಿ. ಇದರಲ್ಲೇನು ವಿಶೇಷ? ಆತ ಸ್ವತ: ಜಾನಪದ ಗಾರುಡಿ. ನಮ್ಮ ಉತ್ತರ ಕರ್ನಾಟಕದ ಸದ್ಯದ ‘ಹುಕ್ಕೇರಿ ಬಾಳಪ್ಪ’. ಜಾನಪದವನ್ನೇ ಉಸಿರಾಗಿಸಿಕೊಂಡು, ಬಡತನದ ಬವಣೆಯನ್ನೇ ಹಾಸಿ-ಹೊದ್ದು..ಈ ಎತ್ತರಕ್ಕೆ ಏರಿದ ರಾಮಣ್ಣನ ಸಾಧನೆ ನನ್ನಲ್ಲಿ ಬೆರಗು ಮೂಡಿಸಿದೆ. ಜಿಡ್ಡುಗಟ್ಟಿರುವ ಸರಕಾರಿ ವ್ಯವಸ್ಥೆಯಲ್ಲಿ, ‘ಇಲ್ಲ’ ಎಂಬ ಪದವೇ ಆಳುತ್ತಿರುವ ಸರಕಾರಿ ಬಡ ಶಾಲೆಯ ಮಾಸ್ತರಾಗಿ, ಅದೂ ಹಮಾಲರ ಮಕ್ಕಳಿಗಾಗಿ ಆತ ದುಡಿದ ಪರಿ ಇದೆಯಲ್ಲ ನನ್ನಲ್ಲಿ ಅಭಿಮಾನ ತಂದಿದೆ.
ರಾಮಣ್ಣನ ಪರಿಚಯವಿರುವ ಎಲ್ಲರೂ ಈ ಶಾಲೆ ಕಂಡು ಬಂದಿದ್ದಾರೆ. ‘ನಮ್ಮಿಂದ ಏನಾಗಬೇಕು?’ ಎಂದು ಹಲವರು ಕೇಳಿದಾಗಲೊಮ್ಮೆ..‘ಆ ನನ್ನ ಬಡ ಮಕ್ಕಳಿಗೆ ಒಂದು ನೂರು ನೋಟ್ಸ್ ಬುಕ್ ಅಥವಾ ನೂರು ಪೆನ್ನು ಕೊಡಿಸ್ರಿ, ಒಂದ ನೂರು ಬಿಳಿ ಅಂಗಿ ಹೊಲಿಸಿ ಕೊಡ್ರಿ’ ಅಂದಿದ್ದಾನೆಯೇ ಹೊರತು, ಎಂದೂ ‘ತನಗೇನು ಬೇಕು?’ ಎಂದು ಹೇಳಿದ ಉದಾಹರಣೆ ಇಲ್ಲ. ತನ್ನ ಪಗಾರವನ್ನೂ ಆ ಮಕ್ಕಳ ಶಾಲಾ ಫೀ ಕಟ್ಟಲು ಬಳಸಿದ ಉದಾಹರಣೆ ನಾನೆಷ್ಟು ಕೊಡಲಿ?
ನನ್ನಂತಹ ಗೆಳೆಯರು ಆತನಿಗೆ ತೋರಿಸುವ ಚಿಕ್ಕ ಪ್ರೀತಿಯನ್ನೇ ದೊಡ್ಡ ಗೌರವ, ಜಗತ್ತಿನ ಅತೀ ದೊಡ್ದ ಔದಾರ್ಯ ಅಂತ ಭಾವಿಸುವವ ರಾಮಣ್ಣ. ಆ ನಯ, ವಿನಯ, ಸಮಾಧಾನ, ಸಮಯ ಪ್ರಜ್ಞೆ ನನಗೆ ಯಾವತ್ತೂ ರಾಮಣ್ಣನ ಪ್ರತಿ ಅಭಿಮಾನ ಮೂಡಿಸಿದೆ.
ನಾನು ಕೆಲಸ ಮಾಡುವ ಐ.ಎಂ.ಸಿ.ಆರ್ ಪತ್ರಿಕೋದ್ಯಮ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಪರಿಸರ ದಿನಾಚರಣೆ ಹಮ್ಮಿಕೊಂಡಿದ್ದೆವು. ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿ, ರಾಮಣ್ಣನಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದೆ. ‘ಬರ್ತೀನೋ..ಮಾರಾಯ..’ ಒಂದೇ ವಾಕ್ಯದ ಉತ್ತರ. ಸರಿಯಾದ ಸಮಯಕ್ಕೆ ಬಂದ. ನಾನು ಕೆಲಸದಲ್ಲಿದ್ದೆ. ಆತ ಬಂದಾಗ ಯಾರೂ ಸ್ವಾಗತಕ್ಕೆ ನಿಂತಿರಲಿಲ್ಲ. ಮೇಲಾಗಿ ನಮ್ಮ ಸೆಕ್ಯೂರಿಟಿ ಆತನನ್ನು ತಡೆದರು. ಯಾವುದಕ್ಕೂ ಬೇಜಾರು ಪಡದೇ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ, ಕೈ ಚೀಲ ಸಹ ತೆಗೆದು ತೋರಿಸಿ, ನನ್ನ ಹುಡುಕಿ ಬಂದ ರಾಮಣ್ಣ!
ಈ ಯಾವ ಬೆಳವಣಿಗೆಗಳ ಬಗ್ಗೆಯೂ ಆತ ನನ್ನಲ್ಲಿ ಪ್ರಸ್ತಾಪಿಸಲಿಲ್ಲ. ನೇರವಾಗಿ ಕಾರ್ಯಕ್ರಮದ ಸಭಾಭವನಕ್ಕೆ ಬಂದ. ಕೈಯಲ್ಲಿ ಹಲಗಿ ಹಿಡಿದು ಹಾಡಿದ. ಇಡೀ ಸಭೆಗೆ ಮೋಡಿ ಮಾಡಿದ. ನಾವು ನೀಡಿದ ಸ್ಮರಣಿಕೆ ಸ್ವೀಕರಿಸಿದ ನಡೆದೇ ಬಿಟ್ಟ ತನ್ನ ಶಾಲೆಗೆ. ಸಂಜೆ ಕರೆ ಮಾಡಿದ..‘ಹರ್ಷಣ್ಣ..ನನ್ನಂತಹ ಬಡ ಕಲಾವಿದಗ ಅಂಥಾ ದೊಡ್ಡ ಕಾಲೇಜಿನ್ಯಾಗ ಅವಕಾಶ ಕೊಡಿಸಿದಿ..ಥ್ಯಾಂಕ್ಸ್ ಪಾ.’ ನನ್ನ ಕಣ್ಣಾಲೆಗಳು ತೇವಗೊಂಡವು. ಅಷ್ಟು ನಿರ್ಲಿಪ್ತ ಸರಸ್ವತಿಯ ಭಕ್ತ ಆತ. ಇತ್ತೀಚೆಗೆ ನಮ್ಮ ಪ್ರಾಚಾರ್ಯೆ ಡಾ.ನಯನಾ ಗಂಗಾಧರ ಅವರು ಸಂಪಾದಿಸಿದ ‘ಮಾಧ್ಯಮ ಅನುಭಾವಿ’ ಕೃತಿಯಲ್ಲಿ ರಾಮಣ್ಣ ‘ಸಾರ್ಥಕ ಸಂವಹನ ಸಾಧನಗಳಾಗಿ ಜಾನಪದ ಮಾಧ್ಯಮಗಳು’ ಎಂಬ ವಿಷಯವಾಗಿ ಒಂದು ಅಧ್ಯಾಯವನ್ನೇ ಬರೆದು ಕೊಟ್ಟ. ಗೌರವಧನ ವಿಚಾರಿಸಲಿಲ್ಲ, ಎಷ್ಟು ಗೌರವ ಪ್ರತಿ ನನಗೆ? ಎನ್ನಲಿಲ್ಲ. ಮತ್ತೆ ಮೇಲಿನ ಮಾತುಗಳನ್ನೇ ಉರು ಹೊಡೆದಂತೆ ಪುನರುಚ್ಛರಿಸಿದ. ನನಗೆ ನಿಜಕ್ಕೂ ಆತನ ಈ ಮುಗ್ಧತೆಯ ಬಗ್ಗೆ ಇಂದಿಗೂ ಬೇಜಾರಿದೆ.
ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೯’ ಗೌರವ ದೊಂದಿಗೆ ಕೊಡಮಾಡುವ ೧ ಲಕ್ಷ ರುಪಾಯಿ ನಗದು ಪುರಸ್ಕಾರವನ್ನು ಸಹ ನಮ್ಮ ರಾಮಣ್ಣ ಹುಬ್ಬಳ್ಳಿ-ಧಾರವಾಡ ನಡುವೆ ಇರುವ ಹಮಾಲರ ಕಾಲೋನಿಯಲ್ಲಿ ಸರಕಾರ ಹಮಾಲರ ಮಕ್ಕಳಿಗಾಗಿಯೇ ಕಟ್ಟಿಸಿದ ಶಾಲೆಗೆ ದಾನ ಮಾಡಿದ್ದಾನೆ. ಅಂದಹಾಗೆ ಇದು ಆತ ಕಟ್ಟಿದ ಶಾಲೆಯೇ ಎಂಬುದು ವಿಶೇಷ. ಅಂತೂ ನಮ್ಮ ರಾಮಣ್ಣ ‘ಸಾಲಿ ಮಾಸ್ತರ್ ಗೆ ಬುದ್ಧಿ ಇಲ್ಲ’ ಎನ್ನುವ ಲೋಕೋಕ್ತಿಯನ್ನು ಸುಳ್ಳಾಗಿಸಿದ. ನನ್ನಂತಹ ಮಾಸ್ತರ್ ಗಳ ಪರವಾಗಿ ಡಬಲ್ ಕಾಂಗ್ರ್ಯಾಟ್ಸ್!
ಆತನಲ್ಲಿಯೂ ಮಾನವ ಸಹಜವಾದ ಕೆಲ ದೌರ್ಬಲ್ಯಗಳಿವೆ. ಆದರೆ ಅವು ನನಗೆ ಗೌಣ. ಕಾರಣ ಸಹೃದಯೀ ಸಂಸಾರವೊಂದಿಗನಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ನಾನು ನಿರೀಕ್ಷಿಸುತ್ತೇನೆ ಎಂದಾದರೆ ಅದು ಅವಾಸ್ತವಿಕವಾದದ್ದು ಎಂದೇ ನನ್ನ ಭಾವನೆ. ಈ ಪ್ರಶಸ್ತಿ ಆತನಿಗೆ ದಕ್ಕುವಲ್ಲಿ ನನ್ನ ಅತ್ತಿಗೆ ಸೌ. ಗಿರಿಜಾ ಅವರ ತ್ಯಾಗ ಅನುಪಮವಾದದ್ದು. ಹಾಗೆಯೇ, ನನ್ನ ವೃತ್ತಿ ಗುರು ಹುಬ್ಬಳ್ಳಿಯ ಕನ್ನಡಪ್ರಭದ ಪ್ರಾಚಾರ್ಯ ವರದಿಗಾರ ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ಶ್ರಮ ಸಾಕಷ್ಟಿದೆ. ಹಾಗಾಗಿ ಅವರಿಗೂ, ಸಂಪಾದಕ ಶ್ರೀ ಎಚ್.ಆರ್.ರಂಗನಾಥ ಹಾಗು ಕಾರ್ಯನಿರ್ವಾಹಕ ಸಂಪಾದಕ ಶ್ರೀ. ರವಿ ಹೆಗಡೆ ಅವರಿಗೆ ನನ್ನ ಕೃತಜ್ಞತೆ ಸಲ್ಲಬೇಕು.
ಆದರ್ಶ ಶಿಕ್ಷಕ ಡಾ.ರಾಮಣ್ಣ ಮೂಲಗಿ ಅವರಿಗೆ ಅಭಿನಂದನೆಗಳು. ಶಿಕ್ಷಣ ಕ್ಷೇತ್ರ ಇಂದು ಇಂತಹ ಕೆಲ ಆಲದ ಮರಗಳ ತಂಪಾದ, ಸೊಂಪಾದ, ಕಂಪಿನ, ಮೌಲ್ಯವಾನ್ ಶಿಕ್ಷಕರಿಂದ ಜೋಪಾನವಾಗಿದೆ ಎನ್ನಲು ಹರ್ಷ ಪಡುತ್ತೇನೆ.