Thursday, February 12, 2009

‘ಸ್ವದೇಶ್’ದಲ್ಲಿ ಶಾರುಖ್ ಖಾನ್.. ‘ಹಿಬ್ಬನಕೇರಿ’ಯಲ್ಲಿ ರಾಮಚಂದ್ರ ನಾಯ್ಕ್!





"ನಮ್ಮ ರಾಮಚಂದ್ರಣ್ಣ ಮೂಲತ: ಒಬ್ಬ ಕೂಲಿ. ಅವರ ತಂದೆ ಕನ್ನಾ ನಾಯ್ಕ್ ಅವರ ಕಾಲದಿಂದಲೂ ಆತನಿಗೆ ಬಡತನದ ಬವಣೆ ತಪ್ಪಿದ್ದಿಲ್ಲ. ಶಾಲೆಮುಖ ಅವ ನೋಡಿದವನಲ್ಲ. ಶ್ರಮ ನಂಬಿ ಬದುಕಿದವ. ಕಾಡು ಕಡಿದು ಆತ ಈ ಹಳ್ಳಿ ಕಟ್ಟಿದ. ಹಾಗೆಯೇ ಸ್ವಂತಕ್ಕೆ ಕಟ್ಟಿಕೊಂಡ ಬದುಕು ಇದೆಯಲ್ಲ ಅದು ಪ್ರೇರಣಾದಾಯಿ" ಮಹಾದೇವ ನಾಯ್ಕ್ ಅಭಿಮಾನದಿಂದ ಹೇಳುತ್ತಿದ್ದರೆ.. ರಾಮಚಂದ್ರಣ್ಣ ಅವರ ಕಣ್ಣುಗಳಲ್ಲಿ ಮಿಂಚು ಹೊಳೆದಿತ್ತು. ಶಾರುಖ್ ಖಾನ್ ಅಭಿನಯದ ಚಲನಚಿತ್ರ ‘ಸ್ವದೇಶ’ ನೀವೆಲ್ಲ ನೋಡಿದ್ದೀರಿ. ಅದೇ ಮಾದರಿಯಲ್ಲಿ ರಾಮಚಂದ್ರ ಕನ್ನಾ ನಾಯ್ಕ್ ‘ಹಿಬ್ಬನಕೇರಿ’ಗೆ ಶಾರುಖ್ ಖಾನ್ ಎಂದರೆ ಅತಿಶಯೋಕ್ತಿ ಅಲ್ಲ. ಅಕ್ಷರಶ: ಈ ಜನರದ್ದು ಹೋರಾಟದ ಬದುಕು.

ಬೆಟ್ಟದ ತುದಿಯಿಂದ ಧುಮುಕಿ, ಕಾಡಿನ ಹಾದಿ ಸೀಳಿಕೊಂಡು ಕಣಿವೆಗೆ ಹರಿಯುವ ಜಲಧಾರೆ. ನೀರಿನ ಸೆಳೆವಿನಿಂದ ನುಣುಪಾದ ಮೇಲ್ಮೈ ಹೊಂದಿ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಬಂಡೆಗಳು. ಇವುಗಳ ಮಧ್ಯೆ ತಂಪಾಗಿ, ಸೊಕ್ಕಿನಿಂದ ರಭಸದಲ್ಲಿ ಹರಿಯುವ ನೀರು. ಈ ನೀರಿನ ಹರಿವಿನಲ್ಲಿ ೨ ಪೈಪ್ ಫಿಲ್ಟರ್ ಅಳವಡಿಸಿಕೊಂಡು ಕುಳಿತಿವೆ. ಅಲ್ಲಿಂದ ೧.೫ ಕಿ.ಮೀ. ದೂರ ಇಳಿಜಾರಿನಲ್ಲಿ ೨೦ ಅಡಿ ಉದ್ದದ ೨೦೦ ವಿವಿಧ ಗಾತ್ರದ ಪೈಪ್ ಗಳನ್ನು ಗುಂಡಿ ತೋಡಿ ಅಳವಡಿಸಲಾಗಿದೆ. ಆ ನೀರು ಹಿಬ್ಬನಕೇರಿಯ ರಾಮಚಂದ್ರ ಕನ್ನಾ ನಾಯ್ಕ್ ಅವರ ಮನೆಗೆ ಹರಿದು ಬರುತ್ತದೆ. ಹಿತ್ತಿಲಿನಲ್ಲಿ ಅಳವಡಿಸಲಾದ ‘ಟರ್ಬೈನ್’ ಗೆ ಒಂದು ಪೈಪ್ ಜೋಡಿಸಲ್ಪಟ್ಟಿದೆ. ‘ಔಟ್ ಪುಟ್’ ವಾಲ್ವ್ ಬಂದು ಮಾಡಿ ‘ಇನ್ ಪುಟ್’ ವಾಲ್ವ್ ನಾಯ್ಕ್ ತಿರುಗಿಸುತ್ತಾರೆ. ಬೆಟ್ಟದ ಝರಿಯ ನೀರು ನೈಸರ್ಗಿಕ ಒತ್ತಡದಿಂದಾಗಿ ರಭಸದಲ್ಲಿ ಪೈಪ್ ಮೂಲಕ ಹರಿದು ಬಂದು ಟರ್ಬೈನ್ ಚಕ್ರ ತಿರುಗುವಂತೆ ಮಾಡುತ್ತದೆ. ಕ್ಷಣಾರ್ಧದಲ್ಲಿ ೮ ವೋಲ್ಟ್ ವಿದ್ಯುತ್ ಉತ್ಪತ್ತಿಯಾಗಿ ಇಡೀ ಮನೆ ೬ ಫ್ಲೋರೋಸೆಂಟ್ ಬಲ್ಬ್ ಗಳಿಂದ ಪಕ್ಕಾ ಬೆಳಗುತ್ತದೆ! ಇನ್ನೊಂದು ಪೈಪ್ ನೀರಾವರಿ ಸ್ಪ್ರಿಂಕ್ಲರ್ ಗೆ ಅಳವಡಿಸಲಾಗಿದ್ದು, ಯಾವುದೇ ಬಾಹ್ಯ ಒಟ್ಟಡವಿಲ್ಲದೇ ನೈಸರ್ಗಿಕವಾಗಿ ಅದು ಇಡೀ ತೋಟಕ್ಕೆ ೩೬೦ ಡಿಗ್ರಿ ಚಿಮ್ಮಿ ನೀರುಣಿಸುತ್ತದೆ!

ಜೋಗದಿಂದ ಕಾರ್ಗಲ್ ೭ ಕಿ.ಮೀ. ಕಾರ್ಗಲ್ ದಿಂದ ಕಾನೂರುಕೋಟೆ ೩೭ ಕಿ.ಮೀ.ಗಳು. ಅಲ್ಲಿಂದ ೭ ಕಿ.ಮೀ. ಕಾಲು ದಾರಿ ಹಿಬ್ಬನಕೇರಿ. ಜನರೇ ಸತತ ೨ ವರ್ಷಗಳು ಶ್ರಮದಾನ ಮಾಡಿ ನಿರ್ಮಿಸಿದ ಮಣ್ಣಿನ ರಸ್ತೆ ಅದು. ಶರಾವತಿ ಅಭಯಾರಣ್ಯದ ತಪ್ಪಲಿನಲ್ಲಿದೆ ಈ ಗ್ರಾಮ. ಶಿವಮೊಗ್ಗ ಜಿಲ್ಲೆ, ತಾಳಗುಪ್ಪ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಾಗರ ತಾಲೂಕಿನ ಕಡೆಯ ಹಳ್ಳಿ. ೨೦೦ ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ, ೩೪ ಕುಟುಂಬಗಳು ಬಾಳುತ್ತಿರುವ ಕಾಡಿನ ಹಳ್ಳಿ.ಹಿಬ್ಬನಕೇರಿ, ಮುಂಡ್ವಾಳ ಮಜಿರೆಗಳು ಸೇರಿ ಬಾನಕೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.ಇಲ್ಲಿಂದ ೧೭ ಕಿ.ಮೀ ದೂರದ ಹಳ್ಳಿ ಬಿಳಿಗಾರಿನ ನಾರಾಯಣ ಸದಸ್ಯರಾಗಿದ್ದಾರೆ. ಸಾಗರ ಪಕ್ಕದ ಕುಗ್ವೆ ಗ್ರಾಮದ ರವಿ ಕುಗ್ವೆ ಜಿಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಸಾಗರದ ಗೋಪಾಲಕೃಷ್ಣ ಬೀಳೂರು ಈ ಭಾಗದ ಶಾಸಕರು.

ಮೂಲಭೂತ ಸೌಕರ್ಯ ಪ್ರಶ್ನೆಯೇ ಇಲ್ಲ. ಸರಕಾರ ಕಲ್ಪಿಸುವ ಮಾತೂ ಇಲ್ಲ. ಕಾರಣ ನೂರೆಂಟು ತಾಂತ್ರಿಕ ಹಾಗು ಆಡಳಿತಾತ್ಮಕ ತೊಂದರೆಗಳು. ಸರಕಾರ ಶರಾವತಿ ಹಿನ್ನೀರಿನ ಫಲವಾಗಿ ಒಕ್ಕಲೆಬ್ಬಿಸಿದ ಜನರಿಗೆ ಪುನರ್ವಸತಿ ಕಲ್ಪಿಸಲು ಈ ಜಾಗೆ ಬಳಸಿಕೊಂಡಿದೆ. ಸರಕಾರ ಸಾಗುವಳಿ ಮಾಡಿಕೊಳ್ಳಲು ಕೊಟ್ಟ ಪಟ್ಟಾ ಭೂಮಿ ೩ ಎಕರೆ ಮಿಕ್ಕುವುದಿಲ್ಲ. ಆದರೆ ಅಕ್ರಮ-ಸಕ್ರಮ ಮಾದರಿಯಲ್ಲಿ ೧೦ ರಿಂದ ೧೨ ಎಕರೆ ಅರಣ್ಯ ಭೂಮಿಯನ್ನು ಜನ ಸಾಗುವಳಿ ಮಾಡಿಕೊಂಡಿದ್ದಾರೆ. ಇದು ಅರಣ್ಯ ಇಲಾಖೆಯ ಕಣ್ಣನ್ನು ಸಹಜವಾಗಿಯೇ ಕೆಂಪಾಗಿಸಿದೆ. ಅಡಿಕೆ, ಬಾಳೆ, ತೆಂಗು, ಗೇರು, ಮಾವು, ಹಲಸು, ಪಪ್ಪಾಯಿ ಸೇರಿದಂತೆ ಭತ್ತ, ವೆನಿಲ್ಲಾ, ಎಲೆ ಹಾಗು ಸಾಂಬಾರ ಪದಾರ್ಥ ಮತ್ತು ತರಕಾರಿ ಇಲ್ಲಿನ ಜನ ಬೆಳೆದುಕೊಳ್ಳುತ್ತಾರೆ. ಸರಕು ಸಾಗಣೆಗೆ ದುಪ್ಪಟ್ಟು ಹಣ ತೆತ್ತು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಯ್ದು ಫಸಲು ಮಾರಾಟ ಮಾಡಲಾಗುತ್ತಿದೆ. ೩ ವರ್ಷಗಳ ಕೆಳಗೆ ಕಾಲು ದಾರಿಯಲ್ಲಿ ತಲೆ ಮೇಲೆ ಹೊತ್ತು ಕಾನೂರುಕೋಟೆಯ ವರೆಗೆ ಸಾಗಿಸುತ್ತಿದ್ದರು ಇಲ್ಲಿನ ಮಣ್ಣಿನ ಮಕ್ಕಳು.
ಹೀಗೆ ರೋಚಕ ವಿಷಯಗಳನ್ನು ಕಿಲಾರದ ವಾಸುದೇವ ನಾಯ್ಕ್ (ಸಂಪೂರ್ಣ ಸಾವಯವ ಗ್ರಾಮದ ರುವಾರಿ ಹಾಗು ಅಕ್ಷಯ ಜೀವನ ಕಿಲಾರದ ಕಾರ್ಯದರ್ಶಿ) ನಮಗೆಲ್ಲ ದಾರಿಯುದ್ದಕ್ಕೂ ವಿವರಿಸುತ್ತ ಹೊರಟಿದ್ದರು. ಚಿಕ್ಕ ಮಣ್ಣಿನ ರಸ್ತೆಯನ್ನು ಸೀಳಿಕೊಂಡು ಇಳಿಜಾರಿನಲ್ಲಿ ಜಾರುವಂತೆ ಮಾರುತಿ ಕಾರು ಬೆಟ್ಟ ಇಳಿಯುತ್ತಿತ್ತು. ಹಿಬ್ಬನಕೇರಿ ನಮಗೆಲ್ಲ ಜಗತ್ತಿನ ೮ನೇ ವಿಸ್ಮಯವಾಗಿ ಪರಿಣಮಿಸಿತ್ತು. ಮಧ್ಯಾನ್ಹ ೧೨ ಗಂಟೆಯ ಸಮಯ..ಆದರೂ ರಸ್ತೆಯುದ್ದಕ್ಕೂ ಮಬ್ಬು ಬೆಳಕು. ಕಾರಿನ ಸಾರಥಿ ನನ್ನ ಅಣ್ಣ ಸೋಮಣ್ಣ ಕಾರಿನ ಒಳಗೂ, ಹೊರಗೂ ಧೂಳು ಅಡರುತ್ತಿದ್ದ ರೀತಿ, ಇಕ್ಕಟ್ಟಾದ ರಸ್ತೆಯಲ್ಲಿ ತುಸು ಆಯ ತಪ್ಪಿದರೂ ಪ್ರಪಾತಕ್ಕೆ ಬೀಳಬಹುದಾದ ಸ್ಥಿತಿ, ಎಲ್ಲ ಆಗಾಗ ನೆನೆಯುತ್ತಿದ್ದ. "ಇನ್ನೂ ಇಂಥಾ ಎಷ್ಟ ಹಳ್ಳಿ ತೋರಸಬೇಕು ಅಂತ ಮಾಡಿ?" ಎಂದು ಕಾಲೆಳೆಯುತ್ತಿದ್ದ. ಮಿತ್ರ ಲಿಂಗರಾಜ "ನಿನ್ನ ಜೀವನ ಪೂರ್ತಿ ಇದ ಆತು..ಇದನ್ನ ಬಿಟ್ಟ ಮತ್ತೇನರೆ ಮಾಡಿದ್ರ ಹೇಳಲಾ.." ಎಂದು ಕಿಚಾಯಿಸುತ್ತಿದ್ದ. ನನ್ನ ವಿದ್ಯಾರ್ಥಿ ಮಿತ್ರರುಗಳಾದ ಗಣಪತಿ ಹೆಗಡೆ ಹಾಗು ಹರೀಶಕುಮಾರ್ ಸಹ ಉತ್ಸುಕರಾಗಿದ್ದರು. ಆದರೂ ಎಲ್ಲರೂ ಪ್ರೀತಿಯಿಂದ ಆ ಹಳ್ಳಿ ಕಾಣಸಿಗುವುದನ್ನೇ ಎದುರು ನೋಡುತ್ತ ಇಕ್ಕೆಲಗಳಲ್ಲಿ ಇಣುಕು ಸೃಷ್ಟಿ ಸೌಂದರ್ಯ ಸವಿಯುತ್ತಿದ್ದೆವು. ನಿಸರ್ಗವೆಂಬ ಕೌತುಕದ ಮುಂದೆ ಮಾನವ ಎಷ್ಟು ಕುಬ್ಜ ಎಂದು ಭಾಸವಾಗುತ್ತಿತ್ತು.

ವಾಸು ಅಣ್ಣ ಪಕ್ಕದಲ್ಲಿ ಕಾರು ನಿಲ್ಲಿಸುವಂತೆ ಸೂಚನೆ ಕೊಟ್ಟರು. "ಇನ್ನು ಇಳಿದು ನಡೆಯುವಾ.. ಕಾರು ಆಚೆ ಬದಿಗೆ ಹೋಗದು" ಎಂದರು. ನೀರವವಾಗಿ ಹರಿಯುತ್ತಿದ್ದ ಹಿಬ್ಬನಕೇರಿಯ ಹಳ್ಳವನ್ನು ದಾಟಿ ಮತ್ತೆ ಗುಡ್ಡ ಹತ್ತಿದೆವು. ಅರ್ಧ ಕಿ.ಮೀ. ಅಂತರದಲ್ಲಿ ರಾಮಚಂದ್ರ ನಾಯ್ಕ್ ಅವರ ಮನೆ ಕಾಣಿಸಿತು. ದೂರದಿಂದಲೇ ಮನೆಗೆ ಸೋಲಾರ್ ಅಳವಡಿಕೆಯಾಗಿರುವುದು, ಡಿ.ಟಿ.ಎಚ್ ಡಿಸ್ಕ್ ಅಣಿಗೊಳಿಸಿರುವುದು ಕಾಣಿಸಿತು. ಖುಷಿಯಿಂದ ಬಂದ ರಾಮಚಂದ್ರ ನಾಯ್ಕ್ ಹತ್ತಾರು ವರ್ಷಗಳ ಪರಿಚಯವಿದ್ದಂತೆ ಕುಶಲ ಕೇಳಿ, ದೊಡ್ಡ ಗುಣ ಮೆರೆದರು. ಕಾಲಿಗೆ ನೀರು ಕೊಟ್ಟು, ವಸ್ತ್ರ ನೀಡಿ ಸ್ವಾಗತಿಸಿದರು. ಕಾಡು ಬಾಳೆ, ಜಂಬು ಹಣ್ಣು ನಮ್ಮ ಆತಿಥ್ಯಕ್ಕೆ ಕಾಯ್ದಿದ್ದವು. ವಾಸು ಅಣ ನಮ್ಮೆಲ್ಲರನ್ನು ಅವರಿಗೆ ಪರಿಚಯಿಸಿದರು.

ರಾಮಚಂದ್ರ ನಾಯ್ಕ್ ನಮ್ಮೊಂದಿಗೆ ಮಾತಿಗಿಳಿದರು. ಅವರ ತಂದೆ ಕನ್ನ ನಾಯ್ಕ್ ಅವರು ಒಡೆಯರ ಕೈ ಕೆಳಗೆ ಜೀವನ ಪೂರ್ತಿ ಜೀತದಾಳಾಗಿ ದುಡಿದವರು. ಆದರೆ ಆ ಚಾಕರಿ ರಾಮಣ್ಣ ಅವರಿಗೆ ಬೇಕಿರಲಿಲ್ಲ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ತಾವೇ ಆಯ್ದುಕೊಂಡು ಸರಕಾರದಿಂದ ಪಟ್ಟಾ ಭೂಮಿ ಪಡೆದು ಇಲ್ಲಿಗೆ ಬಂದಿದ್ದಾಗಿ ಹೇಳಿದರು. ಹತ್ತಾರು ವರ್ಷಗಳ ಕಾಲ ಕತ್ತಲೆ ಹಾಗು ಚಿಮಣಿ ದೀಪದಲ್ಲಿ ಕಾಲು ನೂಕಿದ ನಂತರ ಕೊಲ್ಲೂರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಓರ್ವರು ಬೆಟ್ಟದ ತುದಿಯ ಝರಿ ನೀರಿಗೆ ಪೈಪ್ ಅಳವಡಿಸಿ, ಸಣ್ಣ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಮನೆಗೆ ಬಳಸುತ್ತಿದ್ದ ರೀತಿ ಇವರಿಗೆ ಮೋಡಿ ಮಾಡಿತು. ತಾವು ಏಕೆ ಈ ಪ್ರಯೋಗ ಕೈಗೊಳ್ಳ ಬಾರದು ಎಂದು ಯೋಚಿಸಿದರು.

ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದವರು ಸಿಗಂದೂರು ಸಮೀಪದ ಗೊರಗೋಡಿನ ಸತ್ಯ ಅವರು. ೨೦೦೪ರಲ್ಲಿ ಅವರ ತಾಂತ್ರಿಕ ಸಹಾಯದಲ್ಲಿ ೭ ಸಾವಿರ ರುಪಾಯಿ ಖರ್ಚಿಸಿ ಟರ್ಬೈನ್ ಖರೀದಿಸಿದ್ದಾಯಿತು. ನಂತರ ೧೮ ಸಾವಿರ ರುಪಾಯಿ ಖರ್ಚಿಸಿ ಬೆಟ್ಟದ ತುದಿಯಿಂದ ಮನೆಯ ವರೆಗೆ ಪೈಪ್ ಲೈನ್ ಅಳವಡಿಸಿದ್ದಾಯಿತು. ಅಂತೂ ೨೫ ಸಾವಿರ ರುಪಾಯಿಗಳ ಒಟ್ಟು ವೆಚ್ಚದಲ್ಲಿ ಮನೆಗೆ ವಿದ್ಯುತ್ ಹರಿಯಿತು. ಅಂದಹಾಗೆ ವಿಶೇಷವೆಂದರೆ ಅವರ ಸಮುದಾಯ ಕಾಳಜಿ. ಹಿಬ್ಬನಕೇರಿಯಲ್ಲಿ ಈ ಪ್ರಯೋಗ ಮಾಡಲು ಉಳಿದವರಿಗೂ ಪ್ರೇರಣೆ ನೀಡಿದವರು ರಾಮಚಂದ್ರ ನಾಯ್ಕ್. ಹಾಗಾಗಿ ಅವರ ಮನೆ ಮಾತ್ರವಲ್ಲ..ಹತ್ತಾರು ಮನೆಗಳ ದೀಪ ಪ್ರಥಮ ಬಾರಿಗೆ ಬೆಳಗಲು ಆರಂಭಿಸಿದ್ದು ಹೀಗೆ. ಈಗ ಟರ್ಬೈನ್ ದೀಪ ಉರಿಯುತ್ತಿರುವುದು ೫ ಮನೆಗಳಲ್ಲಿ. ನಾಯ್ಕ್ ಹೇಳಿದರು.."ಕಳೆದ ೫ ವರ್ಷಗಳಲ್ಲಿ ಯಾವ ರಿಪೇರಿ, ನಿರ್ವಹಣೆ ಖರ್ಚಿಲ್ಲ. ಒಟ್ಟು ೮ ವೋಲ್ಟ್ ಕರೆಂಟ್ ಸಿಗ್ತದೆ. ೬ ಬಲ್ಬ್ ಉರಿತಾವೆ. ಸಂಜೆ ೬ ರಿಂದ ರಾತ್ರಿ ೧೧.೩೦ರ ವರೆಗೆ ಉರಿಸ್ತೇವೆ. ತಪ್ಪು ತಿಳೀಬೇಡಿ ಟಿ.ವಿ. ಇದರಿಂದ ಉರಿಯೋಲ್ಲ. ಹಾಗಾಗಿ ಮನೆ ಸೂರಿನ ಮೇಲೆ ಸೋಲಾರ್ ಛತ್ರಿ ಅಂಟಿಸಿರೋದು. ನನ್ನ ಮೋಬೈಲ್..ಬೇಕಿದ್ರೆ ನಿಮ್ಮ ಕ್ಯಾಮೆರಾ ಚಾರ್ಜ್ ಮಾಡಿಕೋಬಹುದು" ಎಂದರು ಉತ್ಸಾಹದಿಂದ. ಅಷ್ಟೇ ಅಲ್ಲ. ಕರೆಂಟ್ ಉತ್ಪತ್ತಿಸಲು ಬಳಸಿದ ನೀರು ಪೋಲಾಗದಂತೆ ಮತ್ತೆ ಭತ್ತದ ಗದ್ದೆಗೆ ಹರಿಸಿಕೊಂಡು ಅವರು ಕೃಷಿ ಕೈಗೊಳ್ಳುತ್ತಾರೆ. ಅವಶ್ಯಕತೆಗೆ ತಕ್ಕಷ್ಟು ಮಾತ್ರ ವ್ಯವಸ್ಥಿತವಾಗಿ ನೀರಿನ ಬಳಕೆ, ಅಪವ್ಯವ ಇಲ್ಲ.

ಬ್ಯಾಟರಿ ವ್ಯವಸ್ಥೆ ಮಾಡಿಕೊಂಡಿಲ್ಲವೇ? ಅಣ್ಣ ಸೋಮಣ್ಣ ನಾಯ್ಕ್ ಅವರನ್ನು ಪ್ರಶ್ನಿಸಿದ. "ನೋಡ್ರಿ..೫ ಕಿ.ಮೀ ಆ ಬ್ಯಾಟರಿಗಳನ್ನ ಹೊತ್ತುಕೊಂಡು ಬರೋದು ಹ್ಯಾಗೆ? ಹೋಗಲಿ ರಿಪೇರಿ ಬಂದ್ರೆ ಮತ್ತೆ ಸಾಗರಕ್ಕೆ ಒಯ್ಯೋದು ಹೇಗೆ? ಮೇಲಾಗಿ..ನಮಗೆ ಕರೆಂಟ್ ಕಾದಿಡೋ ಪ್ರಶ್ನೆ ಇಲ್ಲ. ಝರಿಯಲ್ಲಿ ನೀರು ಇರೋ ವರೆಗೂ ನಮಗೆ ಕರೆಂಟ್ ತೊಂದರೆ ಇಲ್ಲ. ಇಲ್ಲಿಯವರೆಗೆ ಝರಿ ನೀರು ಇಂಗಿಯೇ ಇಲ್ಲ. ಹಾಗಾಗಿ ಆ ಸರ್ಕಸ್ ಬೇಕಿಲ್ಲ" ಅಂದ್ರು. "ಚಿರಂಜೀವಿ ಸಿಂಗ್ ನೇತೃತ್ವದ ಆಯೋಗ ನಕ್ಸಲ್ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದು ನಿಮಗೆಲ್ಲ ಗೊತ್ತಲ್ಲ?". ರಾಮಚಂದ್ರಣ್ಣ ನಮ್ಮನ್ನೇ ಆ ಕುರಿತು ಪ್ರಶ್ನಿಸಿದರು. "ಹಿಬ್ಬನಕೇರಿಯಿಂದ ೫ ಕಿ.ಮೀ ದೂರದಲ್ಲಿರೋ ಕಾನೂರಿಗೆ ಸರಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ನಮ್ಮ ಹಿಬ್ಬನಕೇರಿ ಆ ಪಟ್ಟಿಯಲ್ಲಿ ಬರೋಲ್ಲವಂತೆ! ಅದರಂತೆ ಕಾನೂರಿನ ಜನರ ಅಭಿವೃದ್ಧಿ ಸಾಗಿದೆ. ನಾವು ಮನುಷ್ಯರಲ್ಲವಾ?" ಅಂದ್ರು. ಉತ್ತರ ನಮ್ಮಲ್ಲಿರಲಿಲ್ಲ.

ಸಂಬಂಧಪಟ್ಟ ಎಲ್ಲರನ್ನೂ ಭೇಟಿ ಮಾಡಿ ಈ ವಿಷಯ ಮನವರಿಕೆ ಮಾಡಿಸಿದ್ದಾಗಿ ಹೇಳಿದರು. "ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ವೋಟ್ ಹಾಕಿಸಿಕೊಂಡಿದ್ದು ಬಿಟ್ರೆ ಆಮೇಲೆ ನಮ್ಮವರು ಯಾರೂ ಈ ಊರಿಗೆ ಕಾಲಿಡಲಿಲ್ಲ. ಊರ ದೈವ ಸೋಮೇಶ್ವರನ ಮೇಲೆ ಆಣೆ ಮಾಡಿ ರಸ್ತೆ ಮಾಡಿಸಿಕೊಡುವುದಾಗಿ ಹೇಳಿದ್ರು ನೋಡಿ" ಎಂದು ರಾಮಚಂದ್ರಣ್ಣ ಸಿಟ್ಟಿನಿಂದ ಹೇಳಿದರು.









Monday, February 2, 2009

ಸಾಧನೆ ಇಲ್ಲಿ ‘ಮಾನದಂಡ’ವಲ್ಲ..ಸಾಧಕರ ‘ಮಾನವೇ ದಂಡ’..!

"ಡಾ. ವರ್ಗಿಸ್ ಕುರಿಯನ್ ಕಡೆಯದಾಗಿ ನಿಮಗೊಂದು ಪ್ರಶ್ನೆ.. ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?"

ಕೆಲ ದಿನಗಳ ಹಿಂದೆ ಓರ್ವ ಉತ್ಸಾಹಿ ಯುವ ಪತ್ರಕರ್ತ ಈ ಪ್ರಶ್ನೆ ಕೇಳಿದ್ದ.

ಡಾ. ಕುರಿಯನ್ ಹೇಳಿದ್ದರು.."ಈ ವಯಸ್ಸಿನಲ್ಲಿ, ನಿಜವಾಗಿಯೂ ವ್ಯಕ್ತಿಗೆ ಭವಿಷ್ಯವಿಲ್ಲ. ಅವನಿಗಿರುವುದು ಭೂತಕಾಲ ಮಾತ್ರ."
ಭಾರತದ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿಟ್ರೋಡಾ ಅಭಿಪ್ರಾಯಪಟ್ಟಂತೆ, ಕುರಿಯನ್ ಓರ್ವ ಹುಚ್ಚ. ಹಾಗೆ ಆ ‘ಹುಚ್ಚು’ ಹಿಡಿದಿದ್ದರಿಂದ ಅವರಿಗೆ ಮಹಾತ್ಸಾಧನೆ ಮಾಡಲು ಸಾಧ್ಯವಾಯಿತು. ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಹೇಳುತ್ತಾರೆ.. ‘ಈ ಕುರಿಯನ್ ಅವರಂತೆ ಇನ್ನೊಂದು ಸಾವಿರ ಕುರಿಯನ್ ಗಳು ಇದ್ದಿದ್ದರೆ ಭಾರತದಲ್ಲಿ ಹಾಲಿನ ಹೊಳೆ ಹರಿಸುವುದು ಕಷ್ಟವಾಗುತ್ತಿರಲಿಲ್ಲ.ಸದ್ಯ ಗುಜರಾತನಲ್ಲಿ ಮಾತ್ರ ಹಾಗೆ ಹರಿಸಲು ಸಾಧ್ಯವಾಗಿದೆ.’
ಮುಂಬೈ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಬರೋಡಾದಿಂದ ಸುಮಾರು ೪೦ ಕಿ.ಮೀ ದೂರದಲ್ಲಿ, ಎದ್ದು ಕಾಣದ ತಿರುವಿನಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಸಾಧಾರಣ ಫಲಕ ಆನಂದ ಕಡೆಗೆ ಬಾಣದ ಗುರುತು "ಭಾರತದ ಕ್ಷೀರ ರಾಜಧಾನಿ" ಎಂದು ಸಾರುತ್ತದೆ. ಅದು ಸಾಗುವುದು ಹೈನುಗಾರರನ್ನು ಪ್ರತಿನಿಧಿಸುವ ಹಾಗು ಸೇವೆ ಮಾಡುತ್ತಿರುವ ಅಮೂಲ್, ಗುಜರಾತ ಕೋ-ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್, ನ್ಯಾಶನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡ್, ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್, ನ್ಯಾಷನಲ್ ಕೋ-ಆಪರೇಟಿವ್ ಡೈರಿ ಫೆಡರೇಷನ್ ಆಫ್ ಇಂಡಿಯಾ ಕಚೇರಿಗಳ ಸಮುಚ್ಚಯಗಳ ಕಡೆಗೆ . ಹಾಗಾಗಿ ಈ ಪುಟ್ಟ ಊರು ಜಾಗತಿಕ ಭೂಪುಟದಲ್ಲಿ ಅಗ್ರಗಣ್ಯ ಊರು. ಗ್ರಾಮೀಣಾಭಿವೃದ್ಧಿ ಎಂದರೆ ಏನು? ಎಂಬುದರ ಸಮರ್ಥ ಪರಿಭಾಷೆ ಆನಂದ. ರುವಾರಿ ಪದ್ಮವಿಭೂಷಣ ಡಾ.ವರ್ಗಿಸ್ ಕುರಿಯನ್.

ಇಂದಿನ ೮೭ ವರ್ಷದ ಜ್ಞಾನವೃದ್ಧ ಕುರಿಯನ್ ಗುಜರಾತದ ಆನಂದದಲ್ಲಿ ತಾವು ಉತ್ಪಾದಿಸಿದ ಹಾಲನ್ನು ಮಾರಲು ಹೈನುಗಾರರ ಸಣ್ಣ ಗುಂಪೊಂದು ಮಾಡಿಕೊಂಡಿದ್ದ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯುಸರ್ಸ್ ಯೂನಿಯನ್ ಲಿಮಿಟೆಡ್ (ಈಗ ಅಮೂಲ್) ನಲ್ಲಿ ಸೇವಾಕಾಂಕ್ಷಿಯಾಗಿ ಬಂದು ಸೇರಿದ್ದೇ ತೀರ ಆಕಸ್ಮಿಕ. ಆ ಗುಂಪಿನ ನಾಯಕ ತ್ರಿಭುವನದಾಸ್ ಪಟೇಲರ ಪ್ರಾಮಾಣಿಕತೆ ಹಾಗು ಬದ್ಧತೆಯನ್ನು ಕಂಡು ಕುತೂಹಲ ಕೆರಳಿ ಅವರೊಡನೆ ಕುರಿಯನ್ ಬಂದು ಸೇರಿದರು.


‘ಆನಂದ’ ದಲ್ಲಿ ಸರಕಾರ ನಡೆಸುತ್ತಿದ್ದ ಬೆಣ್ಣೆ ಕಾರ್ಖಾನೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುರಿಯನ್ ನಂತರ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯೂನಿಯನ್ ಲಿಮಿಟೆಡ್ ಸೇರಿದರು. ನ್ಯಾಷನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡಿನ ಅಧ್ಯಕ್ಷರಾಗಿ ‘ಹೊನಲು ಕಾರ್ಯಾಚರಣೆ’ಯನ್ನು ಕಾರ್ಯಗತ ಮಾಡಿದರು. ಈಗ ಸದ್ಯ ಭಾರತ ಸರಕಾರ ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ೨೦೦೬ ರಿಂದ ೫ ವರ್ಷಗಳ ಅವಧಿಗೆ ನೇಮಕ ಮಾಡಿದೆ.


ಅವರ ಕತೃತ್ವ ಶಕ್ತಿ, ಅಸಾಧಾರಣ ಕೊಡುಗೆಗಳನ್ನು ನಾಡು ಗುರುತಿಸಿದ್ದು ವಿಶೇಷ. ಫಿಲಿಪೀನ್ಸ್ ದೇಶ ತನ್ನ ರೆಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ೧೯೬೩ರಲ್ಲಿ ಕೊಡಮಾಡಿದ ಮೇಲೆ ಭಾರತ ಸರಕಾರ ತನ್ನ ಮಣ್ಣಿನ ಮಗನ ಕೊಡುಗೆ ಗಮನಿಸಿತು. ೧೯೬೫ರಲ್ಲಿ ಪದ್ಮಶ್ರೀ, ೧೯೬೬ರಲ್ಲಿ ಪದ್ಮಭೂಷಣ ಹಾಗು ೧೯೭೪ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆಫ್ ಲಾ’ ಗೌರವ ಉಪಾಧಿ, ೧೯೮೬ರಲ್ಲಿ ವಾಟೆಲ್ ಶಾಂತಿ ಪುರಸ್ಕಾರ, ೧೯೮೯ರಲ್ಲಿ ವಿಶ್ವ ಸಂಸ್ಥೆಯ ವಿಶ್ವ ಆಹಾರ ಪ್ರಶಸ್ತಿ ಪ್ರಮುಖವಾದವು.


ನಾಲ್ವರು ಮಕ್ಕಳಲ್ಲಿ ಮೂರನೇಯವರಾಗಿ ಕೇರಳದ ಕಲ್ಲಿಕೋಟೆಯಲ್ಲಿ ೨೬ ನವೆಂಬರ್ ೧೯೨೧ ರಲ್ಲಿ ಕುರಿಯನ್ ಜನಿಸಿದರು. ಅವರ ಚಿಕ್ಕಪ್ಪ ರಾವ ಸಾಹೇಬ್ ಪಿ.ಕೆ.ವರ್ಗಿಸ್ ತನ್ನ ಹುಟ್ಟೂರು ಎರ್ನಾಕುಲಂ ಗೆ ಸಾಕಷ್ಟು ಸೇವೆ ಸಲ್ಲಿಸಿ ಖ್ಯಾತರಾಗಿದ್ದರಿಂದ ಇವರಿಗೆ ‘ವರ್ಗಿಸ್’ ಎಂದು ನಾಮಕರಣ ಮಾಡಲಾಯಿತು. ತಂದೆ ಪುತೆನ್ ಪರಾಕ್ಕಲ್ ಕುರಿಯನ್ ಬ್ರಿಟೀಷರ ಕಾಲದ ಕೊಚ್ಚಿನ್ ನಲ್ಲಿ ಸಿವಿಲ್ ಸರ್ಜನ್ ಆಗಿದ್ದರು. ತಾಯಿ ತುಂಬ ಪ್ರತಿಭಾವಂತರು ಹಾಗು ಪಿಟೀಲು ವಾದಕರಾಗಿದ್ದರು.


ಭಾರತ ಸರಕಾರದ ಗೃಹ ಮಂತ್ರಾಲಯದಿಂದ ಸ್ಕಾಲರ್ ಶಿಪ್ ಪಡೆದು ಅಮೇರಿಕೆಗೆ ವಿಶೇಷ ಅಧ್ಯಯನಕ್ಕೆ ಕುರಿಯನ್ ತೆರಳಿದ್ದರು. ಆಗ "ನಿಮ್ಮ ದೇಶದ ಹಾಲು ನಮ್ಮ ದೇಶದ ಗಟಾರಿನಲ್ಲಿ ಹರಿಯುವ ನೀರಿಗಿಂತ ಹೊಲಸು ಮತ್ತು ಕೆಳಮಟ್ಟದ್ದು" ಎಂಬ ಬ್ರಿಟೀಷ್ ಪ್ರಜೆಯೊಬ್ಬನ ಹಿಯಾಳಿಕೆಯ ಮಾತಿಗೆ ತಕ್ಕ ಉತ್ತರ ನೀಡುವ ಛಲದೊಂದಿಗೆ ಹೋರಾಟಕ್ಕೆ ಸಜ್ಜಾದವರು ವರ್ಗಿಸ್ ಕುರಿಯನ್. ಆ ಮಾತನ್ನು ಛಲವಾಗಿ ಸ್ವೀಕರಿಸದೇ ಹೋಗಿದ್ದರೆ ವಿದೇಶದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಅವರು ಇಂದು ವಿರಾಜಮಾನರಾಗಬೇಕಿತ್ತು. ದೇಶ ಪ್ರೇಮ ಈ ‘ಸಿರಿಯನ್ ಕ್ರಿಷ್ಚಿಯನ್’ ಮಹಾನುಭಾವನನ್ನು ಇಲ್ಲಿಗೆ ತಂದಿಟ್ಟಿತು.


ಕಳೆದ ಶನಿವಾರ ಗುಜರಾತ ಶಾಸಕನೊಬ್ಬ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಮಾಧ್ಯಮ ಗೋಷ್ಠಿಯಲ್ಲಿ ಅದನ್ನು ಬಿಡುಗಡೆಗೊಳಿಸಿ, ಕುರಿಯನ್ ಅವರಿಗೆ ರಾಜ್ಯ ಸರಕಾರ ನೀಡುತ್ತಿರುವ ಎಲ್ಲ ಸೌಕರ್ಯ ಹಾಗು ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ತನ್ನ ಆಕ್ಷೇಪ ಸೂಚಿಸಿದ್ದಾನೆ. ತೀರ ಆರ್ಥಿಕ ಸಂಕಷ್ಠದ ಈ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕಂಪೆನಿಗಳೊಂದಿಗೆ ೩೬೮೫ ಒಡಂಬಡಿಕೆಗಳಿಗೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಲಾಲ್ ಸ್ಟ್ರೀಟ್ ಮಾಸಿಕ ವರದಿ ಮಾಡಿದೆ. ಈ ಹಣ್ಣುಗಳು ಆ ರಾಜ್ಯವನ್ನು ಕಳೆದ ೫ ದಶಕಗಳಲ್ಲಿ ಕಟ್ಟಿದ ಕುರಿಯನ್ ಅವರಂತಹ ಮಹಾನುಭಾವರಿಂದ ಮೋದಿ ಸರಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ.


೩ ಲಕ್ಷ ೫೦ ಸಾವಿರ ಹೈನುಗಾರ ಕುಟುಂಬಗಳಿಗೆ ಜೀವನ ಭದ್ರತೆ ಕಲ್ಪಿಸಿದ, ಗ್ರಾಮಕ್ಕೆ ಸ್ವರಾಜ್ಯ ಕಲ್ಪಿಸಿಕೊಟ್ಟ ಮಹಾನುಭಾವನಿಗೆ ಆ ರಾಜ್ಯ ನಡೆಸಿಕೊಳ್ಳುವ ಪರಿಯೇ ಇದು?
ಯಾವ ಮಾಧ್ಯಮ? ಯಾವ ವೇದಿಕೆ? ಯಾವ ಸಂಘಟನೆ? ಹೋಗಲಿ ಯಾವ ಜನಪ್ರತಿನಿಧಿ ಬೀದಿಗಿಳಿದು ಹೋರಾಡುವುದು ಬಿಡಿ..ಕೊನೆ ಪಕ್ಷ ಖಂಡಿಸುವ ಪ್ರಯತ್ನ ಮಾಡಿದರು? ಬದುಕು ಕಟ್ಟುವ ದೇಶ ಭಕ್ತರಿಗಿಂತ ಬೆಳ್ಳಿ ಪರದೆಯ ಹೋರಾಟಗಾರರಿಗೆ, ಪಾಶ್ಚಿಮಾತ್ಯರನ್ನು ಓಲೈಸುವ ಬೌದ್ಧಿಕ ಮಾರ್ಜನಕ್ಕೆ ಮನ್ನಣೆ ಈಗ ಮಾಧ್ಯಮ, ಸಮಾಜ ನೀಡುತ್ತಿದೆ. ನಮ್ಮ ದೇಶವನ್ನು ತೀರ ಹೀನಾಯವಾಗಿ ಚಿತ್ರಿಸುವ ಅರವಿಂದ ಅಡಿಗರ ‘ದ ವೈಟ್ ಟೈಗರ್’, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ, ಸದ್ಯ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ‘ಸ್ಲಂ ಡಾಗ್ ಮಿಲೇನಿಯರ್’, ‘ಆನ್ ಏರಿಯಾ ಆಫ್ ಡಾರ್ಕ್ ನೆಸ್’ ಬರೆದ ಸರ್ ಸೂರಜ್ ಪ್ರಸಾದ್ ನೈಪಾಲ್ ಅಂತಾರಾಷ್ಟ್ರೀಯ ಸ್ಥರದಲ್ಲಿ ಚರ್ಚೆಯಾಗಿ, ಅವರು ಹೆಕ್ಕಿದ ‘ಮುತ್ತು’ಗಳು ಪ್ರಶಸ್ತಿಗೆ ಭಾಜನವಾಗುತ್ತವೆ.


ನಾವು ಭಾರತೀಯರು ಅನಾಗರಿಕರು ಸೂಕ್ಷ್ಮತೆ ಅರಿಯದವರು, ಹಾವಾಡಿಗರು, ಕರಡಿ, ಕೋತಿ ಕುಣಿಸಿ ಹೊಟ್ಟೆ ತುಂಬಿಕೊಳ್ಳುವವರು, ಡೊಂಬರಾಟದ ಕಿಳ್ಳಿಕ್ಯಾತರು, ಮೂಢನಂಬಿಕೆಗೆ ಒಲಿದವರು, ಬಾವಾಗಳು ಎಂದೆಲ್ಲ ಚಿತ್ರಿಸುವುದು ಕ್ಷಮ್ಯ! ಸಮಾಜದ, ಮಾಧ್ಯಮಗಳ ಮನ್ನಣೆ ಸಹ ಲಭ್ಯ. ಅದೇ ಭಾರತದ ಪ್ರತಿ ಶೃದ್ಧೆ, ರಾಷ್ಟ್ರಪೇಮ ಬಿಂಬಿಸುವ ‘ಲಗಾನ್’, ‘ಚಕ್ ದೇ ಇಂಡಿಯಾ’, ‘ಇಕ್ಬಾಲ್’ ಈಗ ವಿಸಾ ನಿರಾಕರಿಸಲ್ಪಟ್ಟ ಡಾ.ಪ್ರಕಾಶ್ ಆಮ್ಟೆ ಹಾಗು ಡಾ.ಮಂದಾಕಿನಿ ಆಮ್ಟೆ (ಬಾಬಾ ಆಮ್ಟೆ ಅವರ ಮಗ, ಸೊಸೆ) ಹಾಗು ಕುರಿಯನ್ ನಮಗೂ, ನಾವು ವಾಸಿಸುವ ಸಮಾಜಕ್ಕೂ ಹಾಗು ಪೋಷಿಸುವ ಮಾಧ್ಯಮಗಳಿಗೂ ಅಪತ್ರಿಕಾ ವಾರ್ತೆ!


ದೇಶ ಸ್ವಾತಂತ್ರ್ಯ ಪಡೆದು ೬೧ ವರ್ಷಗಳು ಗತಿಸಿದರೂ ಗುಲಾಮೀ ಮಾನಸಿಕತೆ ನಮ್ಮಿಂದ ಹೋಗಲಿಲ್ಲ. ಕತ್ತೆ=ಕುದುರೆ=ಸಮಾನತೆ ಇಂದಿನ ಮಾನದಂಡಗಳು. ಹೀಗೇಕೆ? ಎಂದು ಕೇಳುವವರ ‘ಮಾನವೇ ದಂಡ’!