Monday, February 2, 2009

ಸಾಧನೆ ಇಲ್ಲಿ ‘ಮಾನದಂಡ’ವಲ್ಲ..ಸಾಧಕರ ‘ಮಾನವೇ ದಂಡ’..!

"ಡಾ. ವರ್ಗಿಸ್ ಕುರಿಯನ್ ಕಡೆಯದಾಗಿ ನಿಮಗೊಂದು ಪ್ರಶ್ನೆ.. ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?"

ಕೆಲ ದಿನಗಳ ಹಿಂದೆ ಓರ್ವ ಉತ್ಸಾಹಿ ಯುವ ಪತ್ರಕರ್ತ ಈ ಪ್ರಶ್ನೆ ಕೇಳಿದ್ದ.

ಡಾ. ಕುರಿಯನ್ ಹೇಳಿದ್ದರು.."ಈ ವಯಸ್ಸಿನಲ್ಲಿ, ನಿಜವಾಗಿಯೂ ವ್ಯಕ್ತಿಗೆ ಭವಿಷ್ಯವಿಲ್ಲ. ಅವನಿಗಿರುವುದು ಭೂತಕಾಲ ಮಾತ್ರ."
ಭಾರತದ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿಟ್ರೋಡಾ ಅಭಿಪ್ರಾಯಪಟ್ಟಂತೆ, ಕುರಿಯನ್ ಓರ್ವ ಹುಚ್ಚ. ಹಾಗೆ ಆ ‘ಹುಚ್ಚು’ ಹಿಡಿದಿದ್ದರಿಂದ ಅವರಿಗೆ ಮಹಾತ್ಸಾಧನೆ ಮಾಡಲು ಸಾಧ್ಯವಾಯಿತು. ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಹೇಳುತ್ತಾರೆ.. ‘ಈ ಕುರಿಯನ್ ಅವರಂತೆ ಇನ್ನೊಂದು ಸಾವಿರ ಕುರಿಯನ್ ಗಳು ಇದ್ದಿದ್ದರೆ ಭಾರತದಲ್ಲಿ ಹಾಲಿನ ಹೊಳೆ ಹರಿಸುವುದು ಕಷ್ಟವಾಗುತ್ತಿರಲಿಲ್ಲ.ಸದ್ಯ ಗುಜರಾತನಲ್ಲಿ ಮಾತ್ರ ಹಾಗೆ ಹರಿಸಲು ಸಾಧ್ಯವಾಗಿದೆ.’
ಮುಂಬೈ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಬರೋಡಾದಿಂದ ಸುಮಾರು ೪೦ ಕಿ.ಮೀ ದೂರದಲ್ಲಿ, ಎದ್ದು ಕಾಣದ ತಿರುವಿನಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಸಾಧಾರಣ ಫಲಕ ಆನಂದ ಕಡೆಗೆ ಬಾಣದ ಗುರುತು "ಭಾರತದ ಕ್ಷೀರ ರಾಜಧಾನಿ" ಎಂದು ಸಾರುತ್ತದೆ. ಅದು ಸಾಗುವುದು ಹೈನುಗಾರರನ್ನು ಪ್ರತಿನಿಧಿಸುವ ಹಾಗು ಸೇವೆ ಮಾಡುತ್ತಿರುವ ಅಮೂಲ್, ಗುಜರಾತ ಕೋ-ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್, ನ್ಯಾಶನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡ್, ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್, ನ್ಯಾಷನಲ್ ಕೋ-ಆಪರೇಟಿವ್ ಡೈರಿ ಫೆಡರೇಷನ್ ಆಫ್ ಇಂಡಿಯಾ ಕಚೇರಿಗಳ ಸಮುಚ್ಚಯಗಳ ಕಡೆಗೆ . ಹಾಗಾಗಿ ಈ ಪುಟ್ಟ ಊರು ಜಾಗತಿಕ ಭೂಪುಟದಲ್ಲಿ ಅಗ್ರಗಣ್ಯ ಊರು. ಗ್ರಾಮೀಣಾಭಿವೃದ್ಧಿ ಎಂದರೆ ಏನು? ಎಂಬುದರ ಸಮರ್ಥ ಪರಿಭಾಷೆ ಆನಂದ. ರುವಾರಿ ಪದ್ಮವಿಭೂಷಣ ಡಾ.ವರ್ಗಿಸ್ ಕುರಿಯನ್.

ಇಂದಿನ ೮೭ ವರ್ಷದ ಜ್ಞಾನವೃದ್ಧ ಕುರಿಯನ್ ಗುಜರಾತದ ಆನಂದದಲ್ಲಿ ತಾವು ಉತ್ಪಾದಿಸಿದ ಹಾಲನ್ನು ಮಾರಲು ಹೈನುಗಾರರ ಸಣ್ಣ ಗುಂಪೊಂದು ಮಾಡಿಕೊಂಡಿದ್ದ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯುಸರ್ಸ್ ಯೂನಿಯನ್ ಲಿಮಿಟೆಡ್ (ಈಗ ಅಮೂಲ್) ನಲ್ಲಿ ಸೇವಾಕಾಂಕ್ಷಿಯಾಗಿ ಬಂದು ಸೇರಿದ್ದೇ ತೀರ ಆಕಸ್ಮಿಕ. ಆ ಗುಂಪಿನ ನಾಯಕ ತ್ರಿಭುವನದಾಸ್ ಪಟೇಲರ ಪ್ರಾಮಾಣಿಕತೆ ಹಾಗು ಬದ್ಧತೆಯನ್ನು ಕಂಡು ಕುತೂಹಲ ಕೆರಳಿ ಅವರೊಡನೆ ಕುರಿಯನ್ ಬಂದು ಸೇರಿದರು.


‘ಆನಂದ’ ದಲ್ಲಿ ಸರಕಾರ ನಡೆಸುತ್ತಿದ್ದ ಬೆಣ್ಣೆ ಕಾರ್ಖಾನೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುರಿಯನ್ ನಂತರ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯೂನಿಯನ್ ಲಿಮಿಟೆಡ್ ಸೇರಿದರು. ನ್ಯಾಷನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡಿನ ಅಧ್ಯಕ್ಷರಾಗಿ ‘ಹೊನಲು ಕಾರ್ಯಾಚರಣೆ’ಯನ್ನು ಕಾರ್ಯಗತ ಮಾಡಿದರು. ಈಗ ಸದ್ಯ ಭಾರತ ಸರಕಾರ ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ೨೦೦೬ ರಿಂದ ೫ ವರ್ಷಗಳ ಅವಧಿಗೆ ನೇಮಕ ಮಾಡಿದೆ.


ಅವರ ಕತೃತ್ವ ಶಕ್ತಿ, ಅಸಾಧಾರಣ ಕೊಡುಗೆಗಳನ್ನು ನಾಡು ಗುರುತಿಸಿದ್ದು ವಿಶೇಷ. ಫಿಲಿಪೀನ್ಸ್ ದೇಶ ತನ್ನ ರೆಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ೧೯೬೩ರಲ್ಲಿ ಕೊಡಮಾಡಿದ ಮೇಲೆ ಭಾರತ ಸರಕಾರ ತನ್ನ ಮಣ್ಣಿನ ಮಗನ ಕೊಡುಗೆ ಗಮನಿಸಿತು. ೧೯೬೫ರಲ್ಲಿ ಪದ್ಮಶ್ರೀ, ೧೯೬೬ರಲ್ಲಿ ಪದ್ಮಭೂಷಣ ಹಾಗು ೧೯೭೪ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆಫ್ ಲಾ’ ಗೌರವ ಉಪಾಧಿ, ೧೯೮೬ರಲ್ಲಿ ವಾಟೆಲ್ ಶಾಂತಿ ಪುರಸ್ಕಾರ, ೧೯೮೯ರಲ್ಲಿ ವಿಶ್ವ ಸಂಸ್ಥೆಯ ವಿಶ್ವ ಆಹಾರ ಪ್ರಶಸ್ತಿ ಪ್ರಮುಖವಾದವು.


ನಾಲ್ವರು ಮಕ್ಕಳಲ್ಲಿ ಮೂರನೇಯವರಾಗಿ ಕೇರಳದ ಕಲ್ಲಿಕೋಟೆಯಲ್ಲಿ ೨೬ ನವೆಂಬರ್ ೧೯೨೧ ರಲ್ಲಿ ಕುರಿಯನ್ ಜನಿಸಿದರು. ಅವರ ಚಿಕ್ಕಪ್ಪ ರಾವ ಸಾಹೇಬ್ ಪಿ.ಕೆ.ವರ್ಗಿಸ್ ತನ್ನ ಹುಟ್ಟೂರು ಎರ್ನಾಕುಲಂ ಗೆ ಸಾಕಷ್ಟು ಸೇವೆ ಸಲ್ಲಿಸಿ ಖ್ಯಾತರಾಗಿದ್ದರಿಂದ ಇವರಿಗೆ ‘ವರ್ಗಿಸ್’ ಎಂದು ನಾಮಕರಣ ಮಾಡಲಾಯಿತು. ತಂದೆ ಪುತೆನ್ ಪರಾಕ್ಕಲ್ ಕುರಿಯನ್ ಬ್ರಿಟೀಷರ ಕಾಲದ ಕೊಚ್ಚಿನ್ ನಲ್ಲಿ ಸಿವಿಲ್ ಸರ್ಜನ್ ಆಗಿದ್ದರು. ತಾಯಿ ತುಂಬ ಪ್ರತಿಭಾವಂತರು ಹಾಗು ಪಿಟೀಲು ವಾದಕರಾಗಿದ್ದರು.


ಭಾರತ ಸರಕಾರದ ಗೃಹ ಮಂತ್ರಾಲಯದಿಂದ ಸ್ಕಾಲರ್ ಶಿಪ್ ಪಡೆದು ಅಮೇರಿಕೆಗೆ ವಿಶೇಷ ಅಧ್ಯಯನಕ್ಕೆ ಕುರಿಯನ್ ತೆರಳಿದ್ದರು. ಆಗ "ನಿಮ್ಮ ದೇಶದ ಹಾಲು ನಮ್ಮ ದೇಶದ ಗಟಾರಿನಲ್ಲಿ ಹರಿಯುವ ನೀರಿಗಿಂತ ಹೊಲಸು ಮತ್ತು ಕೆಳಮಟ್ಟದ್ದು" ಎಂಬ ಬ್ರಿಟೀಷ್ ಪ್ರಜೆಯೊಬ್ಬನ ಹಿಯಾಳಿಕೆಯ ಮಾತಿಗೆ ತಕ್ಕ ಉತ್ತರ ನೀಡುವ ಛಲದೊಂದಿಗೆ ಹೋರಾಟಕ್ಕೆ ಸಜ್ಜಾದವರು ವರ್ಗಿಸ್ ಕುರಿಯನ್. ಆ ಮಾತನ್ನು ಛಲವಾಗಿ ಸ್ವೀಕರಿಸದೇ ಹೋಗಿದ್ದರೆ ವಿದೇಶದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಅವರು ಇಂದು ವಿರಾಜಮಾನರಾಗಬೇಕಿತ್ತು. ದೇಶ ಪ್ರೇಮ ಈ ‘ಸಿರಿಯನ್ ಕ್ರಿಷ್ಚಿಯನ್’ ಮಹಾನುಭಾವನನ್ನು ಇಲ್ಲಿಗೆ ತಂದಿಟ್ಟಿತು.


ಕಳೆದ ಶನಿವಾರ ಗುಜರಾತ ಶಾಸಕನೊಬ್ಬ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಮಾಧ್ಯಮ ಗೋಷ್ಠಿಯಲ್ಲಿ ಅದನ್ನು ಬಿಡುಗಡೆಗೊಳಿಸಿ, ಕುರಿಯನ್ ಅವರಿಗೆ ರಾಜ್ಯ ಸರಕಾರ ನೀಡುತ್ತಿರುವ ಎಲ್ಲ ಸೌಕರ್ಯ ಹಾಗು ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ತನ್ನ ಆಕ್ಷೇಪ ಸೂಚಿಸಿದ್ದಾನೆ. ತೀರ ಆರ್ಥಿಕ ಸಂಕಷ್ಠದ ಈ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕಂಪೆನಿಗಳೊಂದಿಗೆ ೩೬೮೫ ಒಡಂಬಡಿಕೆಗಳಿಗೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಲಾಲ್ ಸ್ಟ್ರೀಟ್ ಮಾಸಿಕ ವರದಿ ಮಾಡಿದೆ. ಈ ಹಣ್ಣುಗಳು ಆ ರಾಜ್ಯವನ್ನು ಕಳೆದ ೫ ದಶಕಗಳಲ್ಲಿ ಕಟ್ಟಿದ ಕುರಿಯನ್ ಅವರಂತಹ ಮಹಾನುಭಾವರಿಂದ ಮೋದಿ ಸರಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ.


೩ ಲಕ್ಷ ೫೦ ಸಾವಿರ ಹೈನುಗಾರ ಕುಟುಂಬಗಳಿಗೆ ಜೀವನ ಭದ್ರತೆ ಕಲ್ಪಿಸಿದ, ಗ್ರಾಮಕ್ಕೆ ಸ್ವರಾಜ್ಯ ಕಲ್ಪಿಸಿಕೊಟ್ಟ ಮಹಾನುಭಾವನಿಗೆ ಆ ರಾಜ್ಯ ನಡೆಸಿಕೊಳ್ಳುವ ಪರಿಯೇ ಇದು?
ಯಾವ ಮಾಧ್ಯಮ? ಯಾವ ವೇದಿಕೆ? ಯಾವ ಸಂಘಟನೆ? ಹೋಗಲಿ ಯಾವ ಜನಪ್ರತಿನಿಧಿ ಬೀದಿಗಿಳಿದು ಹೋರಾಡುವುದು ಬಿಡಿ..ಕೊನೆ ಪಕ್ಷ ಖಂಡಿಸುವ ಪ್ರಯತ್ನ ಮಾಡಿದರು? ಬದುಕು ಕಟ್ಟುವ ದೇಶ ಭಕ್ತರಿಗಿಂತ ಬೆಳ್ಳಿ ಪರದೆಯ ಹೋರಾಟಗಾರರಿಗೆ, ಪಾಶ್ಚಿಮಾತ್ಯರನ್ನು ಓಲೈಸುವ ಬೌದ್ಧಿಕ ಮಾರ್ಜನಕ್ಕೆ ಮನ್ನಣೆ ಈಗ ಮಾಧ್ಯಮ, ಸಮಾಜ ನೀಡುತ್ತಿದೆ. ನಮ್ಮ ದೇಶವನ್ನು ತೀರ ಹೀನಾಯವಾಗಿ ಚಿತ್ರಿಸುವ ಅರವಿಂದ ಅಡಿಗರ ‘ದ ವೈಟ್ ಟೈಗರ್’, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ, ಸದ್ಯ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ‘ಸ್ಲಂ ಡಾಗ್ ಮಿಲೇನಿಯರ್’, ‘ಆನ್ ಏರಿಯಾ ಆಫ್ ಡಾರ್ಕ್ ನೆಸ್’ ಬರೆದ ಸರ್ ಸೂರಜ್ ಪ್ರಸಾದ್ ನೈಪಾಲ್ ಅಂತಾರಾಷ್ಟ್ರೀಯ ಸ್ಥರದಲ್ಲಿ ಚರ್ಚೆಯಾಗಿ, ಅವರು ಹೆಕ್ಕಿದ ‘ಮುತ್ತು’ಗಳು ಪ್ರಶಸ್ತಿಗೆ ಭಾಜನವಾಗುತ್ತವೆ.


ನಾವು ಭಾರತೀಯರು ಅನಾಗರಿಕರು ಸೂಕ್ಷ್ಮತೆ ಅರಿಯದವರು, ಹಾವಾಡಿಗರು, ಕರಡಿ, ಕೋತಿ ಕುಣಿಸಿ ಹೊಟ್ಟೆ ತುಂಬಿಕೊಳ್ಳುವವರು, ಡೊಂಬರಾಟದ ಕಿಳ್ಳಿಕ್ಯಾತರು, ಮೂಢನಂಬಿಕೆಗೆ ಒಲಿದವರು, ಬಾವಾಗಳು ಎಂದೆಲ್ಲ ಚಿತ್ರಿಸುವುದು ಕ್ಷಮ್ಯ! ಸಮಾಜದ, ಮಾಧ್ಯಮಗಳ ಮನ್ನಣೆ ಸಹ ಲಭ್ಯ. ಅದೇ ಭಾರತದ ಪ್ರತಿ ಶೃದ್ಧೆ, ರಾಷ್ಟ್ರಪೇಮ ಬಿಂಬಿಸುವ ‘ಲಗಾನ್’, ‘ಚಕ್ ದೇ ಇಂಡಿಯಾ’, ‘ಇಕ್ಬಾಲ್’ ಈಗ ವಿಸಾ ನಿರಾಕರಿಸಲ್ಪಟ್ಟ ಡಾ.ಪ್ರಕಾಶ್ ಆಮ್ಟೆ ಹಾಗು ಡಾ.ಮಂದಾಕಿನಿ ಆಮ್ಟೆ (ಬಾಬಾ ಆಮ್ಟೆ ಅವರ ಮಗ, ಸೊಸೆ) ಹಾಗು ಕುರಿಯನ್ ನಮಗೂ, ನಾವು ವಾಸಿಸುವ ಸಮಾಜಕ್ಕೂ ಹಾಗು ಪೋಷಿಸುವ ಮಾಧ್ಯಮಗಳಿಗೂ ಅಪತ್ರಿಕಾ ವಾರ್ತೆ!


ದೇಶ ಸ್ವಾತಂತ್ರ್ಯ ಪಡೆದು ೬೧ ವರ್ಷಗಳು ಗತಿಸಿದರೂ ಗುಲಾಮೀ ಮಾನಸಿಕತೆ ನಮ್ಮಿಂದ ಹೋಗಲಿಲ್ಲ. ಕತ್ತೆ=ಕುದುರೆ=ಸಮಾನತೆ ಇಂದಿನ ಮಾನದಂಡಗಳು. ಹೀಗೇಕೆ? ಎಂದು ಕೇಳುವವರ ‘ಮಾನವೇ ದಂಡ’!

No comments: