ಈ ಹಳ್ಳಿಯ ಜನಸಂಖ್ಯೆ ೮ ಸಾವಿರ. ಹಾಗೆಯೇ ಅಲ್ಲಿನ ಸಾಕು ದನಗಳ ಸಂಖ್ಯೆ ಜನ ಸಂಖ್ಯೆಯ ಅರ್ಧದಷ್ಟು. ಆದರೆ ಎಲ್ಲರಿಗೂ ಸದ್ಯ ದೊರಕುವುದು ದಿನವೊಂದಕ್ಕೆ ೧ ಲೋಟ ಮಾತ್ರ ನೀರು!
ಗದಗ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಸಮೀಪದ ಹಲ್ಲಿಕೇರಿಯ ಹೃದಯ ಹಿಂಡುವ ಕಥೆ ಇದು. ಒಂದಾಳಿಗೆ ದಿನಕ್ಕೆ ೧೬ ಲೋಟಗಳಷ್ಟು ನೀರು ಕುಡಿಯಲು ಬೇಕು. ಹಾಗೆಯೇ ೧೦ ಲೀಟರ್ ನೀರು ಸ್ನಾನಕ್ಕೆ ಮತ್ತು ೫ ಲೀಟರ್ ನೀರು ಶೌಚ ಮತ್ತು ಮುಖ ಮಾರ್ಜನಕ್ಕೆ. ಆದರೆ ಇಲ್ಲಿನ ಜನ-ಜಾನುವಾರುಗಳ ಸ್ಥಿತಿ ನೀರಿಲ್ಲದೇ ದಯನೀಯ. ಹಿರೀಕರು ಕಟ್ಟಿಸಿದ್ದ ಬಾವಿಯ ನೀರು ಸಾಲದೇ ನಿತ್ಯ ಕಚ್ಚಾಡಿ ಶೋಚನೀಯ ಪರಿಸ್ಥಿತಿಗೆ ಹಳ್ಳಿಕೇರಿ ತಲುಪಿದೆ.
ನೀರಿಗಾಗಿ ಇಲ್ಲಿನ ಜನ ಪಡುತ್ತ ಬಂದ ಬವಣೆಗೆ ನಾಲ್ಕಾರು ದಶಕಗಳಷ್ಟು ಹಳೆಯದಾದ ಇತಿಹಾಸವಿದೆ. ನೀರು ಪಡೆಯಲು ನಡೆಸುತ್ತ ಬಂದ ಹೋರಾಟಗಳಿಗೂ ದಶಕಗಳಷ್ಟು ಐತಿಹ್ಯಗಳಿವೆ. ಆದರೆ ನಿಮಗೆ ಗೊತ್ತಲ್ಲ. ನಮ್ಮ ಆಡಳಿತಶಾಹಿಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮನಸ್ಸಿಲ್ಲ. ಏನಿದ್ದರೂ ‘ಕಡಿದಷ್ಟೇ ತುರುಸಿಕೊಳ್ಳುವ ಜಾಯಮಾನ’. ಹಾಗಾಗಿ ಉಗುರಿನ ಸಮಸ್ಯೆಗೆ ಕೊಡಲಿ ಬಳಸುವ ಅನಿವಾರ್ಯತೆ. ಈ ಹಳ್ಳಿಕೇರಿಯಲ್ಲಿ ಜಿಲ್ಲಾಡಳಿತ ಅನುಷ್ಠಾನಗೊಳಿಸಿದ ಲಕ್ಷಾಂತರ ರುಪಾಯಿ ಮೌಲ್ಯದ ಯೋಜನೆಗಳ ಕಡತ ದಾಖಲೆ ಗಮನಿಸಿದರೆ ನಮ್ಮ ತಲೆ ಸುತ್ತಬೇಕು. ‘ಅಷ್ಟ ಖರ್ಚಾಗಿದ್ರ ನಮ್ಮೂರಿಗೆ ಮುಂದಿನ ಹತ್ತು ತಲೆಮಾರಿಗೆ ನೀರಿನ ಸಮಸ್ಯೆ ಬರಬಾರ್ದು’ ಗ್ರಾಮದ ಯಲ್ಲಪ್ಪ ಚಂದ್ರಣ್ಣವರ ಹೇಳುತ್ತಿದ್ದರೆ ಜನರ ಆಕ್ರೋಷ ರಟ್ಟೆಗೆ ಸದ್ಯದಲ್ಲಿ ಇಳಿಯುವುದೇನೂ ತಡವಿಲ್ಲ.
ಆಡಳಿತಶಾಹಿಯ ಕಾರ್ಯವೈಖರಿಯ ಸ್ಯಾಂಪಲ್ ಹೀಗಿದೆ: ಜಿಲ್ಲಾಡಳಿತ ವಿಶ್ವ ಬ್ಯಾಂಕಿನ ನೆರವಿನಲ್ಲಿ ಹಳ್ಳಿಕೇರಿ ಗ್ರಾಮಕ್ಕೆ ಜಲ ನಿರ್ಮಲ ಯೋಜನೆ ಅನುಷ್ಠಾನಗೊಳಿಸಿ, ಬಿಡುಗಡೆ ಮಾಡಿದ ಹಣ ಕೇವಲ ೩೪ ಲಕ್ಷ ರುಪಾಯಿ. ಶಾಶ್ವತ ಕುಡಿಯುವ ನೀರಿನ ಮೂಲವಿರಬೇಕು ಅಥವಾ ಗುರುತಿಸಿ ಯೋಜನೆ ಅನುಷ್ಠಾನ ಗೊಳಿಸಬೇಕು ಎಂಬ ಶರತ್ತನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಕಾರಣ ಹಳ್ಳಿಕೇರಿ ಗ್ರಾಮದಿಂದ ೪ ಕಿ.ಮೀ. ದೂರದಲ್ಲಿರುವ ಮಲಪ್ರಭಾ ಬಲದಂಡೆ ಕಾಲುವೆ ಬಿಟ್ಟು, ೩ ಕಿ.ಮೀ ಅಂತರದಲ್ಲಿರುವ ಹಿರೇಹಳ್ಳದಲ್ಲಿ ಕೊಳವೆ ಬಾವಿ ಕೊರೆದು ‘ಹಣ ನುಂಗುವ ಕೆರೆ’ ಕಟ್ಟಿದರು. ಜನರ ತಾಪತ್ರಯ ಮಾತ್ರ ಪರಿಹಾರ ಕಾಣಲಿಲ್ಲ. ಕಾರಣ ೨ ವರ್ಷದ ಅವಧಿಯಲ್ಲಿ ಆ ಬೋರ್ ವೆಲ್ ಬತ್ತಿ ಬೋರಲು ಬಿತ್ತು!
ಹಳ್ಳಿಕೇರಿಯ ಜನ ಮತ್ತೆ ಜಿಲ್ಲಾ ಪಂಚಾಯ್ತಿಗೆ ನೀರು ಒದಗಿಸಿಕೊಡಲು ಮೊರೆ ಹೋದರು. ಆದರೆ ಜಿಲ್ಲಾಡಳಿತ ಹೊಸ ಲೆಕ್ಕಕ್ಕೆ ಮುನ್ನುಡಿ ಬರೆಯಲು ಸಿದ್ಧವಾಗಲಿಲ್ಲ. ಆದರೆ ಆ ಗ್ರಾಮದ ಸಕ್ರಿಯ ರಾಜಕಾರಿಣಿ ಎಚ್.ಎ.ಮಾಡೊಳ್ಳಿ ಮುಂಗೈ ಜೋರಿನಿಂದ ಮತ್ತೆ ೧೨ ಲಕ್ಷ ರುಪಾಯಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾದರು. ಅವರೇ ಹೇಳುವಂತೆ "ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ಹಳ್ಳಿಕೇರಿಗೆ ಪುರೋಟಸಬೇಕು ಅಂತ ಜಿಲ್ಲಾಡಳಿತ ನಿರ್ಧಾರ ಮಾಡ್ತು. ಆದ್ರೆ ಕಾಮ್ಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಭಾಳ ಕಳಪೆ ಕಾಮ್ಗಾರಿ ಮಾಡಿಸಿದ. ಆತ ಹಾಕಿದ ಮೂರಿಂಚಿನ ಪೈಪ್ ದೊಳಗ ಮಲಪ್ರಭಾ ನೀರು ಹಳ್ಳಿಕೇರಿಗೆ ಹರದು ಬರಲಿಲ್ಲ!"
ಈ ಮಧ್ಯೆ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹಿರೇಹಳ್ಳದಲ್ಲಿ ಮತ್ತೊಂದು ಬೋರ್ ವೆಲ್ ಕೊರೆದರೂ ಉಪಯೋಗವಾಗಿಲ್ಲ.
ಅಲ್ಲಿಯ ನೀರು ಸಹ ದಾಹ ತೀರಿಸಲು ಉಪಯುಕ್ತವಾಗಿಲ್ಲ ಎಂಬ ದೂರು ದಸ್ತಗೀರ್ ಸಾಬ್, ಶಿವಪ್ಪ ಕುರಹಟ್ಟಿ, ಎಸ್.ಟಿ.ಗಿರೆಡ್ಡಿ ಅವರದ್ದು. ಕೆರೆಯ ನೀರು ಮಳೆ ಬಿದ್ದಾಗ ಪೋಲಾಗದಂತೆ ಒಡ್ಡ್ಡು ನಿರ್ಮಿಸಬೇಕು, ಹೂಳೆತ್ತಿಸಿ ದುರಸ್ಥಿ ಮಾಡಬೇಕು, ಗ್ರಾಮಸ್ತಹ್ರ ಕುಡಿಯುವ ನೀರಿನ ಪೂರೈಕೆಗಾಗಿ ನೀರಾವರಿ ಇಲಾಖೆ ನಿಗದಿ ಪಡಿಸಿದ ಗರಿಷ್ಟ ಇಂಚಿನ ಪೈಪ್ ಅಳವಡಿಸಿ, ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ಪೂರೈಸಬೇಕು ಎಂಬುದು ಅವರ ಆಗ್ರಹ ಪೂರ್ವಕ ವಿನಂತಿ.
ಹೀಗೆ ಒಟ್ಟು ೪೬ ಲಕ್ಷ ರುಪಾಯಿ ಹಳ್ಳಿಕೇರಿ ಜನ-ಜಾನುವಾರುಗಳಿಗೆ ನೀರು ಕುಡಿಸಲು ಬಿಡುಗಡೆಯಾಗಿದ್ದು, ಕಡತಗಳಲ್ಲಿ ಅಂಕಿಅಂಶ ಲಭ್ಯ. ಆದರೆ ಸಮಸ್ಯೆ ಮಾತ್ರ ಮತ್ತಷ್ಟು ಉಲ್ಬಣಿಸಿದೆ. ಹಳ್ಳಿಕೇರಿಯ ಕೆರೆ ‘ರೊಕ್ಕ ನುಂಗುವ ಕೆರೆಯಾಗಿ’, ಇದ್ದ ಹಿರೀಕರ ಬಾವಿ ‘ಜೀವ ಹಿಂಗುವ ಗುಂಡಿಯಾಗಿ’ ಪರಿವರ್ತನೆಗೊಂಡಿವೆ. ಗ್ರಾಮದಲ್ಲಿ ವಾಹನಗಳಿದ್ದವರು, ರಟ್ಟೆ ಹಾಗು ತೋಳ್ಬಲ ಇರುವ ಯುವಕರು ಸಮೀಪದ ಇಬ್ರಾಹಿಂಪೂರ್ ಹಾಗು ಅಡ್ನೂರ್ ಗ್ರಾಮಗಳಿಂದ ನೀರನ್ನು ಹೊತ್ತು, ಹೇರಿಕೊಂಡು ತರುತ್ತಿದ್ದಾರೆ.
ವಾಹನಗಳ ವ್ಯವಸ್ಥೆ ಹೊಂದಿಲ್ಲದವರು ತೊಟ್ಟು ನೀರಿಗಾಗಿ ಅದೇ ಹಿರೀಕರ ಬಾವಿಯಲ್ಲಿ ಜೀವದ ಹಂಗು ತೊರೆದು, ತರಹೇವಾರಿ ಸರ್ಕಸ್ ಮಾಡುತ್ತ ಪರಸ್ಪರ ಕೈ,ಕೈ ಮೀಲಾಯಿಸುವ ಹಂತಕ್ಕೂ ಹೋಗುತ್ತಿದ್ದಾರೆ. ಹಿರಿಯರಿಗೆ ನಿತ್ಯ ಇವರೆಲ್ಲರ ಜಗಳ
ಬಿಡಿಸುವುದೇ ಒಂದು ಉದ್ಯೋಗವಾಗಿದೆ. ಯುಅವಕರೆಲ್ಲ ನೀರು ತುಂಬುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ನೀರಿನ ಬವಣೆಯಿಂದಾಗಿ ಹಳ್ಳಿಕೇರಿಯಲ್ಲಿ ಜನರ ನಿದ್ದೆ ಹಾರಿದೆ. ನೆಮ್ಮದಿ ಮಣ್ಣುಗೂಡಿದೆ. ಅಣ್ಣಿಗೇರಿ ಪಟ್ಟಣ ಪುರಸಭೆ ಕಳೆದ ೨ ದಶಕಗಳ ಹಿಂದೆ ಮೊಣಕಾಲುಗಳ ವರೆಗೆ ಎಣ್ಣೆ ಹರಿಸುವಷ್ಟು ಸುಭೀಕ್ಷೆಯಿಂದ ಕೂಡಿತ್ತು!
2 comments:
ಗದಗ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಸಮೀಪದ ಹಲ್ಲಿಕೇರಿಯ ಹೃದಯ ಹಿಂಡುವ ಕಥೆ ಇದು.
hello sir namaskaragalu. neevu bared lekhanadalli melin salinante heluvudadre navalgund taluku gadag jillege seridre dharwad jillege 4 talukugalaguttave. eg dharwada jillege eruv talukagal sankhye 5. tiliyiri. hallikeri graamaviruvudu dhrawad jilleya navalgund talukinalli embuvudu nanna anisike hagu abhipraya. neevu bared lekhanadalli balasida hallikeri yava jilleya yava talukige seriddu embudannu tilisi punya kattikolli. nimma lekhanadalli tappu idyo atva nanna grhikeyu sariyagillavo gottill neevu pariharisi gurugale. pl heege baredenendu tappu tiliyabedi. kshame irali. hageye nimme preetiyirali.
bahala mana muttuvante barediddiri sir.... any remedy for it???
Post a Comment